Psalms 85

ಸಂಪೂರ್ಣ ರಕ್ಷಣೆಯನ್ನು ನಿರೀಕ್ಷಿಸುವ ಭಕ್ತನ ವಿಜ್ಞಾಪನೆ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ.

1ಯೆಹೋವನೇ, ನಿನ್ನ ದೇಶವನ್ನು ಕಟಾಕ್ಷಿಸಿದ್ದಿ;
ಯಾಕೋಬ್ಯರನ್ನು ಸೆರೆಯಿಂದ ಬಿಡಿಸಿ ಬರಮಾಡಿದ್ದಿ.
2 ನಿನ್ನ ಪ್ರಜೆಯ ದ್ರೋಹವನ್ನು ಕ್ಷಮಿಸಿದ್ದಿ;
ಅವರ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿದ್ದಿ.
ಸೆಲಾ


3

ನಿನ್ನ ರೌದ್ರವನ್ನೆಲ್ಲಾ ತೊರೆದಿದ್ದಿ;

ನಿನ್ನ ಉಗ್ರಕೋಪವನ್ನು ಬಿಟ್ಟಿದ್ದಿ.
4 ನಮ್ಮನ್ನು ರಕ್ಷಿಸುವ ದೇವರೇ, ನಮಗೆ ಅಭಿಮುಖನಾಗು;
ನಮ್ಮ ವಿಷಯದಲ್ಲಿ ಬೇಸರವನ್ನು ಬಿಡು.
5 ಸದಾಕಾಲವೂ ನಮ್ಮ ಮೇಲೆ ಸಿಟ್ಟುಮಾಡಿ ಕೊಳ್ಳುವೆಯಾ?
ತಲತಲಾಂತರಗಳಿಗೂ ಕೋಪವನ್ನು ಬೆಳೆಸುವಿಯೋ?

6

ನಿನ್ನ ಪ್ರಜೆಯಾದ ನಾವು ನಿನ್ನಲ್ಲಿ ಆನಂದಿಸುವಂತೆ,

ನೀನು ನಮ್ಮನ್ನು ಪುನಃ ಉಜ್ಜೀವಿಸುವುದಿಲ್ಲವೋ?
7 ಯೆಹೋವನೇ, ನಿನ್ನ ಕೃಪೆಯನ್ನು ನಮಗೆ ತೋರಿಸು;
ನಿನ್ನ ರಕ್ಷಣೆಯನ್ನು ನಮಗೆ ಅನುಗ್ರಹಿಸು.

8

ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ.

ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ.
ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ.
9 ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ.
ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು.

10

ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು;

ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು.
11 ಸತ್ಯತೆಯು ಭೂಮಿಯಿಂದ ಹುಟ್ಟುವುದು;
ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.

12

ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು;

ನಮ್ಮ ದೇಶವು ತನ್ನ ಬೆಳೆ ಕೊಡುವುದು.
13 ನೀತಿಯು ಆತನ ಮುಂದೆ ಹೋಗುತ್ತಾ,
ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.

Copyright information for KanULB